ಹೊಸ ಉಪಗ್ರಹಗಳು -
ಗುರುಗ್ರಹಕ್ಕೆ ಉಪಗ್ರಹಗಳಿರುವುದನ್ನು ಗೆಲಿಲಿಯೊ (1564-1642) ಆವಿಷ್ಕರಿಸಿದ್ದು ಇತರ ಗ್ರಹಗಳಿಗೂ ಉಪಗ್ರಹಗಳಿರುವ ಸಾಧ್ಯತೆಯನ್ನು ಸೂಚಿಸಿತು. ಅನೇಕ ಖಗೋಲವಿಕ್ಷಕರನ್ನು ಉಪಗ್ರಹಗಳ ಅನ್ವೇಷಣೆಗೆ ಇದು ಪ್ರೇರೇಪಿಸಿತು. ತತ್ಪರಿಣಾಮವಾಗಿ ಪತ್ತೆಯಾದ ಉಪಗ್ರಹಗಳ ಸಂಖ್ಯೆ ಬೆಳೆಯತೊಡಗಿತು. ಸುಧಾರಿತ ದೂರದರ್ಶಕಗಳ ತಯಾರಿಯಲ್ಲಿ ಆದ ಪ್ರಗತಿ ಇದನ್ನು ಪ್ರೋತ್ಸಾಹಿಸಿತು.  ವಿಲಿಯಮ್ ಹರ್ಷೆಲ್ (1792-1871), ಜಿಯೋವಿನಿ ಕ್ಯಾಸಿನಿ (1625-1712), ಎಡ್ವರ್ಡ್ ಬರ್ನಾರ್ಡ್ (1857-1923), ವಿಲಿಯಮ್ ಲಾಸೆಲ್ (1799-1880), ಎಡ್ವರ್ಡ್ ಪಿಕರಿಂಗ್ (1846-1919) ಇವರೇ ಮೊದಲಾದ ಅನೇಕ ಖ್ಯಾತನಾಮರು ಉಪಗ್ರಹಗಳ ಪಟ್ಟಿ ಉದ್ದವಾಗಲು ಕಾರಣರಾದರು. 1930ರ ವೇಳೆಗೆ ಆವಿಷ್ಕøತ ಉಪಗ್ರಹಗಳ ಸಂಖ್ಯೆ 20ಕ್ಕೆ ಏರಿತ್ತು. ಸೆತ್ ಬಾರ್ನೆಸ್ ನಿಕಲ್ (1891-1963) ಗುರುಗ್ರಹದ 4 ಉಪಗ್ರಹಗಳನ್ನು ಆವಿಷ್ಕರಿಸಿದಾಗ (1914, 1938, 1951) ಅತಿ ಹೆಚ್ಚು ಉಪಗ್ರಹಗಳುಳ್ಳ (12) ಗ್ರಹ ಎಂಬ ಖ್ಯಾತಿ ಗುರುಗ್ರಹದ್ದಾಯಿತು. ಯುರೆನಸ್‍ನ ಮಿರಾಂಡ ಮತ್ತು ನೆಪ್ಚೂನ್‍ನ ನೆರೈಡ್ ಉಪಗ್ರಹಗಳನ್ನು ಜಿರಾರ್ಡ್ ಪೀಟರ್ ಕೈಪರ್ (1905-1973) ಆವಿಷ್ಕರಿಸಿದಾಗ (1948, 49) ಉಪಗ್ರಹಗಳ ಪಟ್ಟಿ ಸಂಪೂರ್ಣವಾಯಿತೆಂದು ಬಹುಮಂದಿ ಭಾವಿಸಿದರು. ತದನಂತರ ಪತ್ತೆಯಾದ ಶನಿಯ ಒಂದು ಉಪಗ್ರಹ (1974), ಪ್ಲೂಟೋದ ಉಪಗ್ರಹ (1978), ವಾಯೇಜರ್ I ಮತ್ತು II ಎಂಬ ಎರಡು ಆಕಾಶನೌಕೆಗಳು (1979-80) ಪತ್ತೆಹಚ್ಚಿದ ಗುರು ಮತ್ತು ಶನಿ ಗ್ರಹಗಳ ಉಪಗ್ರಹಗಳು ಮತ್ತು ಗುರುಗ್ರಹದ ಮೊದಲನೆಯ ಕೃತಕ ಉಪಗ್ರಹ ಎಂಬ ಖ್ಯಾತಿಪಾತ್ರವಾದ ಗೆಲಿಲಿಯೊ ಆಕಾಶನೌಕೆ (1989) ಪತ್ತೆಹಚ್ಚಿದ ಉಪಗ್ರಹಗಳಿಂದಾಗಿ ಈ ತೀರ್ಮಾನವನ್ನು ಹುಸಿಯಾಗಿಸಿತು. ತತ್ಪರಿಣಾಮವಾಗಿ ಉಪಗ್ರಹಗಳ ಹಳೆಯ ನಾಮಕರಣ ಪದ್ಧತಿಗೆ ಬದಲಾಗಿ ಆವಿಷ್ಕರಿಸಿದ ವರ್ಷ ಹಾಗೂ ಕ್ರಮಸಂಖ್ಯೆ ಬಳಸಿ ನಾಮಕರಣ ಮಾಡುವ ಪದ್ಧತಿ ರೂಢಿಗೆ ಬಂದಿತು (ಉದಾ: 2003 ರಲ್ಲಿ ಆವಿಷ್ಕಾರವಾದ ಮೊದಲನೆಯ ಶನಿಯ ಉಪಗ್ರಹ, 2003 S1). ಆಕಾಶನೌಕೆಗಳ ದಕ್ಷತೆಯಲ್ಲಿ ಆದ ಸುಧಾರಣೆಗಳ ಪರಿಣಾಮವಾಗಿ ಉಪಗ್ರಹಗಳ ಪಟ್ಟಿ ಬೆಳೆಯುತ್ತಲೇ ಇದೆ. ಕೆಲವೇ ಕಿಮೀ ಗಾತ್ರದ ಬಂಡೆಯಂತಹ ಉಪಗ್ರಹಗಳೂ ಕ್ಷುದ್ರಗ್ರಹಗಳಿಗೆ ಉಪ (ಕ್ಷುದ್ರ) ಗ್ರಹಗಳಿರುವ ಸಂಗತಿಯೂ ಪತ್ತೆಯಾಗಿದೆ. ಎಂದೇ, ಉಪಗ್ರಹ ಎಂಬ ಹಣೆಪಟ್ಟಿ ಹಚ್ಚಬೇಕಾದರೆ ಇರಲೇಬೇಕಾದ ಲಕ್ಷಣಗಳನ್ನು ನಿರ್ಧರಿಸುವ ಬಗ್ಗೆಯೂ ಚಿಂತನೆ ನಡೆದಿದೆ.  			
	(ಎಸ್.ಎಚ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ